thumb|ಗೋರಿಂಗ್, ಹರ್ಮನ್ ವಿಲ್ಹೆಲ್ಮ್‌

1893-1946. ನಾಜಿ಼ ಜರ್ಮನಿಯ ಒಬ್ಬ ರಾಜಕಾರಣಿ, ಸೈನಿಕ ಮತ್ತು ಆರ್ಥಿಕ ಮುಖಂಡ. 1893ರ ಜನವರಿ 12ರಂದು ಬವೇರಿಯದ ರೊಸೆನ್ಹೀಂನಲ್ಲಿ ಜನಿಸಿದ. ತಂದೆ ಒಬ್ಬ ವಸಾಹತು ಅಧಿಕಾರಿ. 1914ರಲ್ಲಿ ವಿಮಾನದಳದ ಅಧಿಕಾರಿಯಾಗಿ ಸೇರಿದ. 1918ರಲ್ಲಿ ನಡೆದ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿ ಮೊದಲನೆಯ ದರ್ಜೆಯ ಐರನ್ ಕ್ರಾಸ್ ಪಡೆದ. ಒಂದನೆಯ ಮಹಾಯುದ್ಧದ ಅನಂತರ ಸ್ವೀಡನಿನಲ್ಲಿ ಫಾಕರ್ ವಿಮಾನ ಕಾರ್ಖಾನೆಗಾಗಿಯೂ ಆಮೇಲೆ ಸ್ವೆನ್ಸ್‌ಕ ಲಫ್ತ್ರಾಫಿಕ್ಗಾಗಿಯೂ ಕೆಲಸ ಮಾಡಿದ. 1923ರಲ್ಲಿ ರಿನ್ ಫಾನ್ ಕೆಂಟ್ಸವಳನ್ನು ವಿವಾಹವಾಗಿ ಮ್ಯೂನಿಕ್ನಲ್ಲಿ ವಾಸಿಸತೊಡಗಿದ. ಅಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಹಿಟ್ಲರನನ್ನು ಕಂಡು, ಅವನ ಜೊತೆಗೂಡಿದ. ಹಿಟ್ಲರ್ ಇವನನ್ನು ಕೂಡಲೆ ಒಬ್ಬ ಅಧಿಕಾರಿಯನ್ನಾಗಿ ನೇಮಿಸಿಕೊಂಡ. ನವೆಂಬರ್ 1923ರಲ್ಲಿ ಮ್ಯೂನಿಕ್ನಲ್ಲಿ ನಾಜಿ಼ಗಳು ಅಧಿಕಾರಕ್ಕೆ ಬರಲು ನಡೆಸಿದ ಗಲಭೆಯಲ್ಲಿ ಗಾಯಗೊಂಡು, ದಸ್ತಗಿರಿಯಾದ. ಆದರೆ ಆಸ್ಟ್ರಿಯಕ್ಕೆ ತಪ್ಪಿಸಿಕೊಂಡು ಹೋದ. 1927ರಲ್ಲಿ ಜರ್ಮನಿಗೆ ಹಿಂದಿರುಗಿ, ಹಿಟ್ಲರನೊಡನೆ ಸೇರಿದ. 1928ರಲ್ಲಿ ರೈಕ್ಸ್ಟಾಗ್ಗೆ ಹಿಟ್ಲರನ ಬೆಂಬಲದಿಂದ ಗೋರಿಂಗನ ಚುನಾವಣೆಯಾಯಿತು.

ಗೋರಿಂಗ್ ಕೈಗಾರಿಕೋದ್ಯಮಿಗಳ ಮತ್ತು ಶ್ರೀಮಂತರ ಸಖ್ಯ ಬೆಳಸಿ ಅವರನ್ನು ಹಿಟ್ಲರನ ಅನುಕೂಲಕ್ಕೆ ಬಳಸಿಕೊಂಡ. ನಾಜಿ಼ ಪಕ್ಷ 1932 ರಲ್ಲಿ ನಡೆದ ಚುನಾವಣೆಯಲ್ಲಿ ಜಯಗಳಿಸಿದ ಮೇಲೆ ಗೋರಿಂಗನಿಗೆ ರೈಕ್ಸ್ಟಾಗ್ನ ಅಧ್ಯಕ್ಷ ಸ್ಥಾನ ಪ್ರಾಪ್ತವಾಯಿತು. ಹಿಟ್ಲರ್ ಅಧಿಕಾರಕ್ಕೆ ಬಂದಾಗ ಗೋರಿಂಗನನ್ನು ಖಾತಾರಹಿತ ಮಂತ್ರಿಯಾಗಿ ನೇಮಿಸಿದ. ಇವನು ವಾಯುದಳದ ಕಮಿಷನರ್, ಪ್ರಷ್ಯದ ಮುಖ್ಯಮಂತ್ರಿ ಮತ್ತು ಒಳಾಡಳಿತ ಮಂತ್ರಿಯಾಗಿ ಅಧಿಕಾರ ಚಲಾಯಿಸಿದ. ಈತನ ಅಧಿಕಾರದಲ್ಲಿ ಪ್ರಷ್ಯದ ಆಡಳಿತ ಮತ್ತು ಪೊಲೀಸ್ ದಳದಲ್ಲಿ ನಾಜಿ಼ಗಳು ತುಂಬಿಕೊಂಡರು. ಅನಂತರ ಗೋರಿಂಗನಿಗೆ ಜನರಲ್ ಹುದ್ದೆ ದೊರಕಿತು. ಹಿಟ್ಲರ್ ಈತನನ್ನು ರಾಯಭಾರಿಯಾಗಿ ಇಟಲಿ, ಪೂರ್ವ ಯುರೋಪ್ಗಳಿಗೆ ಕಳುಹಿಸಿದ. 1933ರ ಫೆಬ್ರುವರಿ 27ರಂದು ರೈಕ್ಸ್ಟಾಗ್ ಕಟ್ಟಡವನ್ನು ಸುಡಲು ನಡೆಸಿದ ಪಿತೂರಿಯಲ್ಲಿ ಇವನೂ ಸೇರಿದ್ದನೆಂದು ಮೊದಲು ನಂಬಲಾಗಿತ್ತು. 1935ರಲ್ಲಿ ಈತ ವಿಮಾನ ದಳದ ದಂಡನಾಯಕನಾದ.
ಹಿಟ್ಲರ್ 1936ರಲ್ಲಿ ಈತನನ್ನು ಜರ್ಮನಿಯ ನಾಲ್ಕು ವರ್ಷಗಳ ಆರ್ಥಿಕ ಯೋಜನೆಯ ಅಧಿಕಾರಿಯನ್ನಾಗಿ ನೇಮಿಸಿದ. ಗೋರಿಂಗ್ ಜರ್ಮನಿಯ ಆರ್ಥಿಕ ಸರ್ವಾಧಿಕಾರಿಯಾದ. ಎರಡನೆಯ ಮಹಾಯುದ್ಧ ಆರಂಭವಾದಾಗ ಗೋರಿಂಗ್ ಹಿಟ್ಲರನ ಉತ್ತರಾಧಿಕಾರಿಯಾಗಿ ನೇಮಕ ಹೊಂದಿದ. 1945ರ ಏಪ್ರಿಲ್ನಲ್ಲಿ ಹಿಟ್ಲರ್ ಜರ್ಮನಿಗೆ ಮಾರ್ಗದರ್ಶನ ನೀಡುವುದನ್ನು ಬಿಟ್ಟನೆಂದು ಗೋರಿಂಗ್ ಭಾವಿಸಿ ಆತನ ನಿಯೋಗಿಯಾಗಿ ಅಧಿಕಾರ ಚಲಾಯಿಸಲು ಮುಂದಾದ. ಆದರೆ ಹಿಟ್ಲರ್ ಇವನನ್ನು ಎಲ್ಲ ಅಧಿಕಾರಗಳಿಂದ ವಿಮೋಚನೆಗೊಳಿಸಿ ನಾಜಿ಼ ಪಕ್ಷದಿಂದ ತೆಗೆದುಹಾಕಿದ. ಅಮೆರಿಕನ್ ಪಡೆಗಳು ಇವನನ್ನು ದಸ್ತಗಿರಿ ಮಾಡಿದುವು. ನ್ಯೂರೆಂಬರ್ಗಿನಲ್ಲಿ ಈತನ ವಿಚಾರಣೆ ನಡೆದು ಇವನಿಗೆ ಮರಣದಂಡನೆ ವಿಧಿಸಲಾಯಿತು. 1946ರ ಅಕ್ಟೋಬರ್ 15ರ ಸಂಜೆ, ಇವನನ್ನು ಫಾಸಿಗೆ ಗುರಿಪಡಿಸುವ ಮುನ್ನ, ಈತ ವಿಷ ತೆಗೆದುಕೊಂಡು ಪ್ರಾಣ ಬಿಟ್ಟ. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ